ಬಹುನಿರೀಕ್ಷಿತ ಸಲ್ಮಾನ್ ಖಾನ್ ಅಭಿನಯದ ರಾಧೆ ಚಿತ್ರ ಇದೇ ಮೊದಲ ಬಾರಿ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಬಿಡುಗಡೆ ಆದರೂ ಒಂದೇ ದಿನ 42 ಲಕ್ಷ ವೀಕ್ಷಣೆ ಪಡೆದು ಹೊಸ ದಾಖಲೆ ಬರೆದಿದೆ.
ಕೊರೊನಾ ವೈರಸ್ ಎರಡನೇ ಅಲೆಯ ಅಬ್ಬರದ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ವಿಧಿಸಲಾಗಿದೆ. ಕೆಲವು ಥಿಯೇಟರ್ ಹೊರತುಪಡಿಸಿದರೆ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಇದೇ ಮೊದಲ ಬಾರಿ ಸಲ್ಮಾನ್ ಖಾನ್ ಚಿತ್ರ ಬಿಡುಗಡೆ ಆಗಿತ್ತು.
ಈದ್ ದಿನದ ಪ್ರಯುಕ್ತ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ರಾಧೆ ಚಿತ್ರ ಬಿಡುಗಡೆ ಆಗಿದ್ದು, ಮೊದಲ ದಿನವೇ 42 ಲಕ್ಷ ಜನರು ವೀಕ್ಷಿಸಿದ್ದಾರೆ. ಈ ಮೂಲಕ ಮೊದಲ ದಿನ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಚಿತ್ರ ಎಂಬ ದಾಖಲೆ ಬರೆಯಿತು.
ಸಲ್ಮಾನ್ ಖಾನ್ ಟ್ವೀಟ್ ಮಾಡಿ ಈ ಸಂಭ್ರಮ ಹಂಚಿಕೊಂಡಿದ್ದು, ಸಿನಿಮಾ ರಂಗ ನಿಮ್ಮ ಪ್ರೀತಿ, ವಿಶ್ವಾಸ ಇಲ್ಲದೇ ಉಳಿಯಲು ಸಾಧ್ಯವಿಲ್ಲ. ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಸಲ್ಮಾನ್ ಖಾನ್ ಚಿತ್ರ ಮೊದಲ ದಿನವೇ ದಾಖಲೆ ವೀಕ್ಷಣೆ ಪಡೆದಿದ್ದಕ್ಕೆ ಶಾರೂಖ್ ಖಾನ್ ಕೂಡ ಅಭಿನಂದಿಸಿದ್ದಾರೆ.