ಬೆಂಗಳೂರು : ಕೊರೋನಾ ಎರಡನೇ ಅಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಜನರು ಇನ್ನಷ್ಟು ಹೆಚ್ಚು ಸೋಂಕು ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುವಂತ ಅವರು, ನಗರದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಗರದಲ್ಲಿ ಪ್ರತಿಭಟನೆ, ಮೆರವಣಿಗೆ,ಜಾಥಾ,ಮುಷ್ಕರ ನಡೆಸುವುದಕ್ಕೆ ಅನುಮತಿ ಇಲ್ಲ. ಧಾರ್ಮಿಕ ಸ್ಥಳಗಳ ಬಾಗಿಲು ಮುಚ್ಚುವುದಿಲ್ಲ.ಆದರೆ ಜನರು ಗುಂಪುಗೂಡಿ ಪ್ರಾರ್ಥಿಸುವುದಕ್ಕೆ ಅನುಮತಿ ಇಲ್ಲ. ಈಜುಕೊಳ,ಸ್ವಿಮ್ಮಿಂಗ್ ಪೂಲ್ ಗಳಲ್ಲಿ ಅರ್ಧದಷ್ಟು ಜನರೊಂದಿಗೆ ಕಾರ್ಯನಿರ್ವಹಿಸಬಹುದು.
ಹೊಟೇಲ್ ರೆಸ್ಟೋರೆಂಟ್, ಪಬ್ ಗಳು ಅರ್ಧದಷ್ಟು ಜನರಿಗೆ ಮಾತ್ರ ಪ್ರವೇಶ ನೀಡಬೇಕು. ಮಾಲ್,ಮಾರುಕಟ್ಟೆ ಹಾಗೂ ದಿನಸಿ ಅಂಗಡಿಗಳಲ್ಲಿ ಥರ್ಮಲ್ ಸ್ಕ್ರಿನಿಂಗ್, ಮಾಸ್ಕ್,ಸ್ಯಾನಿಟೈಸರ್ ಕಡ್ಡಾಯಗೊಳಿಸಲಾಗಿದೆ. ನಿಯಮ ಉಲ್ಲಂಘಿಸುವ ಅಂಗಡಿಗಳನ್ನು ಮುಚ್ಚಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಸಿದ್ದಾರೆ.
ಕೊರೋನಾ ನಿಯಂತ್ರಣಕ್ಕೆ ರೂಪಿಸಲಾಗಿರುವ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆ, ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗುವುದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.