ಬೆಂಗಳೂರು: ದುಡಿಯುವ ವರ್ಗಕ್ಕೆ, ರೈತರಿಗೆ ಪ್ಯಾಕೇಜ್ ಘೋಷಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ. ಈ ವಿಚಾರವಾಗಿ ಸುಧೀರ್ಘ ಪತ್ರ ಬರೆದಿರುವ ಅವರು ಪ್ರಸ್ತುತ ಸ್ಥಿತಿಯನ್ನು ವಿವರಿಸಿದ್ದಾರೆ.
ರಾಜ್ಯದಲ್ಲಿ ಈಗ ಲಾಕ್‍ಡೌನ್ ಹೇರಿಕೆ ಮಾಡಿರುವುದರಿಂದ ಈಗಾಗಲೇ ಬಸವಳಿದು ಹೋಗಿರುವ ದುಡಿಯುವ ವರ್ಗದ ಜನರಿಗೆ ನ್ಯಾಯಯುತವಾದ ಆರ್ಥಿಕ ಪ್ಯಾಕೇಜನ್ನು ಘೋಷಿಸುವ ಮೂಲಕ ಬಿಕ್ಕಟ್ಟಿನಲ್ಲಿರುವ ರಾಜ್ಯದ ದುಡಿಯುವ ಸಮುದಾಯಗಳ ಸಂಕಷ್ಟವನ್ನು ಹೋಗಲಾಡಿಸಬೇಕು. ದುಡಿಯಲೆಂದು ಬಂದವರು ಮರಳಿ ವಾಪಸ್ಸು ಹೋಗಿದ್ದಾರೆ. ಆದ್ದರಿಂದ ಸರ್ಕಾರ ಈ ಎಲ್ಲ ರೈತಾಪಿ ಕುಟುಂಬಗಳಿಗೆ ಬೀಜ, ಗೊಬ್ಬರ, ಔಷಧ ಮುಂತಾದವುಗಳನ್ನು ಉಚಿತವಾಗಿ ವಿತರಿಸಬೇಕು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 1.30 ಲಕ್ಷ ಬಿ.ಪಿ.ಎಲ್. ವರ್ಗಕ್ಕೆ ಸೇರಿದ ಕುಟುಂಬಗಳಿಗೆ ಪ್ರತಿ ತಿಂಗಳು ಕನಿಷ್ಠ 10 ಸಾವಿರ ರೂಪಾಯಿಗಳ ಆರ್ಥಿಕ ಪ್ಯಾಕೇಜನ್ನು ಈ ಕೂಡಲೇ ಘೋಷಿಸಬೇಕು. ರಾಜ್ಯದಲ್ಲಿ 87 ಲಕ್ಷ ರೈತಾಪಿ ಕುಟುಂಬಗಳಿವೆ. ಈ ರೈತಾಪಿ ಕುಟುಂಬಗಳಿಗೂ ಸಹ ತಿಂಗಳಿಗೆ 10 ಸಾವಿರ ರೂಗಳ ಪ್ಯಾಕೇಜನ್ನು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸೋಮವಾರ ಸಿಎಲ್‌ಪಿ ಸಭೆ :
ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಜೊತೆಗೆ ಕೊರೊನಾ ನಿಯಂತ್ರಣ ಸಂಬಂಧ ಸೋಮವಾರ ಸಿಎಲ್‌ಪಿ ಸಭೆಯನ್ನು
ವರ್ಚುವಲ್ ಮೂಲಕ ಮೀಟಿಂಗ್ ಕರೆದಿದ್ದಾರೆ. ಬೆಳಗ್ಗೆ 11ಗಂಟೆಗೆ ಸಭೆ ನಡೆಸಲಾಗುತ್ತಿದೆ. ಜಿಲ್ಲೆಗಳಲ್ಲಿ ಸೋಂಕು ಹೆಚ್ಚಳ ಮತ್ತು ಸಾವುಗಳಾಗುತ್ತಿವೆ. ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸೋಂಕಿತರಿಗೆ ಬೆಡ್ ಹಾಗೂ ಆಮ್ಲಜನಕ ಕೊರತೆಯಾಗಿದೆ. ಹೀಗಾಗಿ ಬಿಜೆಪಿ ಸರ್ಕಾರದ ಲೋಪದೋಷಗಳ ಬಗ್ಗೆ ಅನುಸರಿಸಬೇಕಾದ ಕ್ರಮ ಹಾಗೂ ವಾಸ್ತವ ಸ್ಥಿತಿ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ.