ಪರೋಕ್ಷವಾಗಿ ಲಾಕ್ ಡೌನ್ ಮುಂದುವರೆಸಿದರೆ ಒಳ್ಳೆಯದು ಎಂದ ಆರೋಗ್ಯ ಸಚಿವ ಕೆ. ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಲಾಕ್ ಡೌನ್ ಹಂತ ಹಂತವಾಗಿ ಕಡಿಮೆ ಮಾಡುವ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಜ್ಞರ ವರದಿ ಕೈ ಸೇರಿದ್ದು, ಅದನ್ನು ಸಿಎಂ ಗೂ ಕೊಟ್ಟಿದ್ದೇವೆ. ತಜ್ಞರ ಪ್ರಕಾರ ಪಾಸಿಟಿವಿಟಿ ರೇಟ್ ಶೇ.5ಕ್ಕೆ ಇಳಿದ ನಂತರ ಅನ್ ಲಾಕ್ ಒಳ್ಳೆಯದು ಎಂದಿದ್ದಾರೆ ಎಂದರು.
ತಜ್ಞರ ವರದಿ ನೀಡಿದ ನಂತರ ನಾವು ಮುಖ್ಯಮಂತ್ರಿಗೆ ನಮ್ಮ ಸಲಹೆ ಕೊಡುತ್ತೇವೆ. ತೀರ್ಮಾನವನ್ನೂ ಸಿಎಂ ಮಾಡ್ತಾರೆ. ಆ ಅಭಿಪ್ರಾಯ ಸಭೆಯಲ್ಲಿ ಚರ್ಚೆ ಮಾಡಿದ್ರೆ ನಿರ್ಧಾರ ತೆಗೆದುಕೊಳ್ಳಬಹುದು.
ಅನ್ ಲಾಕ್ ಏಕಾಏಕಿ ಮಾಡಲು ಸಾಧ್ಯವಿಲ್ಲ. ಲಾಕ್ ಡೌನ್ ಸ್ವರೂಪ ಹೇಗಿರಬೇಕು ಎಂದು ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ತಜ್ಞರ ಜೊತೆ ಚರ್ಚೆ ಮಾಡುತ್ತಾರೆ. ಯಾವುದನ್ನು ಸಡಿಲ ಮಾಡಬೇಕು ಎನ್ನುವುದರ ಕುರಿತು ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಲಾಕ್ ಡೌನ್ ಮುಂದುವರಿಸುವುದು ಸೂಕ್ತ ಎಂದು ತಜ್ಞರು ಸೂಚಿಸಿದ್ದಾರೆ. ಹಂತ ಹಂತವಾಗಿ ಕಡಿಮೆ ಮಾಡಲು ಹೇಳಿದ್ದಾರೆ. ಈಗಾಗಲೇ ಸೋಂಕಿತರ ಪ್ರಮಾಣ ರಾಜ್ಯದಲ್ಲಿ ಕಡಿಮೆ ಆಗಿದೆ, ಆದರೆ ಶೇ.5ರಷ್ಟು ಕಡಿಮೆ ಆಗಿಲ್ಲ ಎಂದು ಸುಧಾಕರ್ ಹೇಳಿದರು.