ಕೈರೋ: ಸುಯೆಜ್ ಕಾಲುವೆಯಲ್ಲಿ ಕಳೆದೊಂದು ವಾರದಿಂದ ಸಿಲುಕಿದ್ದ ಬೃಹತ್ ಸರಕು ಸಾಗಾಣಿಕಾ ಹಡಗು ಎವರ್ಗಿವನ್ ಕಾರ್ಯಾಚರಣೆ ಯಶಸ್ವಿಯಾಗಿದೆ. ಕಳೆದೊಂದು ವಾರದಿಂದ ಈ ಮಾರ್ಗದಲ್ಲಿ ಲಂಗರು ಹಾಕಿ ನಿಂತಿದ್ದ ಇನ್ನೂರೈವತ್ತಕ್ಕೂ ಅಧಿಕ ಸರಕು ಸಾಗಾಣಿಕಾ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ಮೂಲಕ ವಿಶ್ವದ ಅತಿ ದೊಡ್ಡ ಜಲಮಾರ್ಗದ ಟ್ರಾಫಿಕ್ ಜಾಮ್ಗೆ ಮುಕ್ತಿ ಸಿಕ್ಕಂತಾಗಿದೆ.
ನಿನ್ನೆ ಇಡೀ ವಾರ ಟಗ್ಬೋಟ್ಗಳ ಸಹಾಯದಿಂದ ತೆರವು ಕಾರ್ಯಾಚರಣೆ ನಡೆಸಲಾಗಿತ್ತಾದರೂ ಏನೂ ಪ್ರಯೋಜನವಾಗಿರಲಿಲ್ಲ. ಇಕ್ಕಟ್ಟಾದ ಸುಯೆಜ್ ಕಾಲುವೆಯಲ್ಲಿ ಎವರ್ಗಿವನ್ ಹಡಗಿನ ಕೆಳಗೆ ಬೃಹತ್ ಬಂಡೆಕಲ್ಲು ಇತ್ತು. ಇದನ್ನು ತೆರವುಗೊಳಿಸುವ ಕಾರ್ಯ ಶೇ.80ರಷ್ಟಾಗಿತ್ತಾದರೂ ಬೃಹತ್ ಹಡಗು ಒಂದಿಂಚೂ ಕದಲಿರಲಿಲ್ಲ. ಆದರೆ ಹುಣ್ಣಿಮೆ ಚಂದ್ರನ ಕಾರಣದಿಂದ ಹಡಗು ಮತ್ತೆ ತೇಲಿತು ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಾಮಾನ್ಯವಾಗಿ ಹುಣ್ಣಿಮೆಯಂದು ಸಾಗರದ ಅಲೆಗಳು ಚಂದ್ರನ ಗುರುತ್ವಾಕರ್ಷಣೆಗೆ ಪುಟಿದೇಳುತ್ತವೆ. ಇದೇ ಕಾರಣದಿಂದ ನಿನ್ನೆ ಹಡಗು ಕದಲಿತು ಎನ್ನಲಾಗುತ್ತಿದೆ. ಕಿರಿದಾದ ಸುಯೆಜ್ ಕಾಲುವೆಯಲ್ಲಿ ಚಂದ್ರನ ಸೆಳೆತಕ್ಕೆ ನೀರಿನ ಮಟ್ಟ ಹೆಚ್ಚಿದ್ದರಿಂದ ಹಡಗು ತೆರವು ಕಾರ್ಯಾಚರಣೆ ಯಶಸ್ವಿಯಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಹಡಗು ತೆರವು ಕಾರ್ಯಾಚರಣೆಗೆ ಬೋಸ್ಕಲಿಸ್ ಕಂಪನಿಯ ನೆರವನ್ನು ಪಡೆದುಕೊಳ್ಳಲಾಗಿತ್ತು. ಇನ್ನು ಎರಡು ಮೂರು ದಿನಗಳಲ್ಲೇ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಸುಯೆಜ್ ಕಾಲುವೆ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದರು. ಅಕಸ್ಮಾತ್ ಇದು ಸಾಧ್ಯವಾಗದೇ ಇದ್ದರೆ, ಹಡಗಿನಲ್ಲಿ ತುಂಬಲಾಗಿರುವ ಸಾವಿರಾರು ಕಂಟೇನರ್ಗಳನ್ನು ಕೆಳಗೆ ಇಳಿಸಿ ಹಡಗನ್ನು ನೀರಿಗೆ ತಳ್ಳಲು ಯೋಜಿಸಲಾಗಿತ್ತು ಎಂದು ಹಡಗು ಕಂಪನಿ ತಿಳಿಸಿದೆ.