ಸಾರಿಗೆ ನೌಕರರ ಪ್ರತಿಭಟನೆಗೆ ಬಗ್ಗುವ ಪ್ರಶ್ನೆಯೇ ಇಲ್ಲ. ಪ್ರತಿಭಟನೆ ಮುಂದುವರಿಸಿದರೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಸೌಕರರ ಪ್ರತಿಭಟನೆ 5ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಸಂಬಳ ಕಡಿತ ಮಾಡುವುದು ಸೇರಿದಂತೆ ಹಲವು ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ನೌಕರರು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ನೈಟ್ ಕರ್ಫ್ಯೂ ಮೊದಲ ದಿನ ಸಕ್ಸಸ್ ಆಗಿದೆ. ನರೇಂದ್ರ ಮೋದಿಯವರ ಸೂಚನೆಯಂತೆ ನಿಯಮ ಜಾರಿ ಮಾಡಲಾಗಿದೆ. ಇಂದಿನಿಂದ ಲಸಿಕೆ ಅಭಿಯಾನ ಜಾರಿ ಆಗಲಿದೆ. ಪ್ರತಿಯೊಬ್ಬರೂ ಈ ಅವಕಾಶವನ್ನು ಬಳಸಿಕೊಂಡು ಲಸಿಕೆ ಹಾಕಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.
ಉದ್ಯೋಗಿಗಳನ್ನ ಕೆಲಸದಿಂದ ತೆಗೆಯುವಂತಿಲ್ಲ. ರಾತ್ರಿ ಕರ್ಫ್ಯೂ ನೆಪದಲ್ಲಿ ರಾತ್ರಿ ಪಾಳಿ ಉದ್ಯೋಗಿಗಳನ್ನ ತೆಗೆದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.