ದುಬೈ: ಯುಎಇಯ ಮೊದಲ ಮಹಿಳಾ ಗಗನಯಾತ್ರಿಯನ್ನು ದುಬೈ ದೊರೆ ವಿಶ್ವಕ್ಕೆ ಪರಿಚಯಿಸಿದ್ದಾರೆ. ದುಬೈ ದೊರೆ ಶೇಖ್ ಮೊಹಮದ್ ಬಿನ್ ರಶೀದ್ ಅಲ್ ಮುಕ್ತೌಮ್ ತಮ್ಮ ಟ್ವಿಟರ್ ಖಾತೆಯಲ್ಲಿ ಮೊದಲ ಮಹಿಳಾ ಗಗನಯಾತ್ರಿಯ ಬಗ್ಗೆ ಹೇಳಿದ್ದಾರೆ.
27ರ ಹರೆಯದ ನೌರಾ ಅಲ್ ಮಾತ್ರೋಶಿ ಗಗನಯಾತ್ರಿಯಾಗಿ ತರಬೇತಿ ಪಡೆದ ಮಮೊದಲ ಅರಬ್ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಯುಎಇ ಬಾಹ್ಯಾಕಾಶ ಯೋಜನೆಯಡಿ ತರಬೇತಿ ಪಡೆದ ನಾಲ್ವರು ಗಗನಯಾತ್ರಿಗಳಲ್ಲಿ ನೌರಾ ಕೂಡ ಒಬ್ಬರು.
ನೌರಾ ಶೀಘ್ರದಲ್ಲಿಯೇ ನಾಸಾದ ತಂಡವನ್ನು ಸೇರಲಿದ್ದಾರೆ ಎನ್ನಲಾಗಿದೆ. ನೌರಾ ಸದ್ಯ ಅಭುದಾಬಿಯ ನ್ಯಾಷನಲ್ ಪೆಟ್ರೋಲಿಯಂ ಕನ್ಸ್ಟ್ರಕ್ಷನ್ ಕಂಪನಿಯ ಉದ್ಯೋಗಿಯಾಗಿದ್ದಾರೆ. ಮುಂಬರುವ ಯುಎಇಯ ಬಾಹ್ಯಾಕಾಶ ಸಂಬಂಧೀ ಯೋಜನೆಗಳಲ್ಲಿ ನೌರಾ ಮಹತ್ವದ ಪಾತ್ರ ವಹಿಸಲಿದ್ದಾರೆ ಎನ್ನಲಾಗಿದೆ.
ನೌರಾ ಅಲ್ ಮಾತ್ರೋಶಿ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ದುಬೈ ದೊರೆ ಮಾಡಿರುವ ಟ್ವೀಟ್ನ್ನು ಸಾವಿರಾರು ಜನ ರಿಟ್ವೀಟ್ ಮಾಡುತ್ತಿದ್ದಾರೆ.