ರಾಮನಗರ : ರಾಜ್ಯದಲ್ಲಿ ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ರದ್ದು ಮಾಡಬೇಕು. ಪರೀಕ್ಷೆಗಳಿಲ್ಲದೇ ವಿದ್ಯಾರ್ಥಿಗಳನ್ನು ಪಾಸ್ ಮಾಡಿ ಎಂದು ಸರ್ಕಾರಕ್ಕೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳ ಜೊತೆಗೆ ಸಚಿವ ಸುರೇಶ್ ಕುಮಾರ್ ಅವರು ಆಟವಾಡಬಾರದು. 12 ತಿಂಗಳಲ್ಲಿ ಕೇವಲ 2 ತಿಂಗಳ ಆನ್ಲೈನ್ ಕ್ಲಾಸ್ ಮಾಡಿ ಪರೀಕ್ಷೆ ಬರೆಯಿರಿ ಅಂದ್ರೆ ಹೇಗೆ ಎಂದು ಪ್ರಶ್ನಿಸಿರುವ ಅವರು, ಜೂನ್ 1 ರಂದು ರಾಜ್ಯ ಸರ್ಕಾರ ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಮನೆಯಲ್ಲಿಯೇ ಅರ್ಧ ತಾಸು ಸತ್ಯಾಗೃಹ ಮಾಡಬೇಕೆಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.
ಒಂದು ವೇಳೆ ಪರೀಕ್ಷೆ ರದ್ದು ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.