ಬೆಂಗಳೂರು : ನಗರದ ಬಹುತೇಕ ಪ್ರದೇಶಗಳಲ್ಲಿ ಇಂದು ಮಧ್ಯಾಹ್ನವೇ ಜೋರು ಮಳೆ ಸುರಿಯುತ್ತಿದೆ. ಬೆಳಿಗ್ಗೆಯಿಂದ ಬಿಸಿಲು ಹಾಗೂ ಕೆಲ ಬಾರಿ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ 2.40 ಗಂಟೆಯಿಂದಲೇ ಜಿಟಿ ಜಿಟಿಯಾಗಿ ಮಳೆ ಆರಂಭವಾಗಿ, ನಂತರ ಜೋರು ಮಳೆ ಬರುತ್ತಿದೆ. ಗಾಳಿಯೂ ಜೋರಾಗಿ ಬೀಸುತ್ತಿದೆ.
ಇಂದು ಬೆಳಗ್ಗೆಯಿಂದಲೂ ಬಿಸಿಲು, ಸೆಖೆಯಿತ್ತು. ಸುಮಾರು 30 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನವಿತ್ತು. ಮಧ್ಯಾಹ್ನವಾಗುತ್ತಿದ್ದಂತೆ ಮೋಡ ಕವಿಯಲು ಶುರುವಾಗಿತ್ತು. ಅದೀಗ 19 ಡಿಗ್ರಿಗೆ ಇಳಿದಿದೆ. ಮಳೆ ರಾತ್ರಿಯೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೆಜೆಸ್ಟಿಕ್, ಶಿವಾನಂದ ವೃತ್ತ, ಮೇಕ್ರಿ ವೃತ್ತ, ಹೆಬ್ಬಾಳ, ವಿಜಯನಗರ, ಸಿಂಗನಾಯಕನಹಳ್ಳಿ, ರಾಜಾನುಕುಂಟೆ, ವಿ.ನಾಗೇನಹಳ್ಳಿ, ಕೆ.ಜಿ.ಹಳ್ಳಿ, ಯಲಹಂಕ, ಎಚ್.ಗೊಲ್ಲಹಳ್ಳಿ, ವಡೇರಹಳ್ಳಿ, ದಯಾನಂದನಗರ, ಶಿವಕೋಟೆ, ಮಂಡೂರು, ಅಟ್ಟೂರು, ಮನೋರಾಯನಪಾಳ್ಯ, ಹೆಮ್ಮಿಗೆಪುರ, ನಾಗಾಪುರ, ವಿದ್ಯಾರಣ್ಯಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗುಡುಗು- ಸಿಡಿಲು ಸಹಿತ ಮಳೆ ಸುರಿಯುತ್ತಿದೆ.
ಕೊರೊನಾ ಸೋಂಕು ತಡೆಗೆ ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದರಿಂದ ನಗರದಲ್ಲಿ ಜನರ ಓಡಾಟ ಕಡಿಮೆ ಇದೆ. ಮಳೆಯಿಂದಾಗಿ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಕೆಲ ಕಡೆ ಕಾಲುವೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ತ್ಯಾಜ್ಯವೆಲ್ಲ ರಸ್ತೆಗೆ ಬಂದು ಬಿದ್ದಿದೆ.