ಬೆಂಗಳೂರು: ರಾಜ್ಯಕ್ಕೆ ಜೂನ್ 4 ಅಥವಾ 5ರಂದು ಮುಂಗಾರಿನ ಪ್ರವೇಶವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರ ನಡುವೆ ಇಂದಿನಿಂದ 4 ದಿನಗಳ ಕಾಲ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಇಂದಿನಿಂದ ಜೂನ್ 4 ರವರೆಗೆ ಗುಡುಗು ಸಹಿತ ಭಾರೀ ಮಳೆಯಾಗಲಿದ್ದು, ಹಳದಿ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕದ ಧಾರವಾಡ, ಬೆಳಗಾವಿ, ಗದಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ, ಈ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ಶಿವಮೊಗ್ಗ, ಹಾಸನ, ಕೊಡಗು, ಕೋಲಾರ, ಚಾಮರಾಜನಗರ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರ್ಗಿ, ಬೀದರ್, ಚಿಕ್ಕಮಗಳೂರಿನಲ್ಲಿ ಇಂದಿನಿಂದ ಮಳೆಯ ಅಬ್ಬರ ಹೆಚ್ಚಾಗಲಿದೆ.
ನಿನ್ನೆಯೇ ಕೇರಳಕ್ಕೆ ಪ್ರವೇಶಿಸಬೇಕಿದ್ದ ಮುಂಗಾರು ಜೂನ್ 3ಕ್ಕೆ ಕೇರಳವನ್ನು ಪ್ರವೇಶಿಸಲಿದೆ. ಇದರ ಪರಿಣಾಮವಾಗಿ ಇಂದಿನಿಂದ ಜೂನ್ 4ರವರೆಗೂ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದಿನಿಂದ 4 ದಿನಗಳವರೆಗೆ ಕೇರಳ ಮತ್ತು ಮಾಹೆ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.