ಮಂಗಳೂರು : ಅರಬ್ಬೀ ಸಮುದ್ರದಲ್ಲಿ ತೌಕ್ತೆ ಚಂಡಮಾರುತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ತೌಕ್ತೆ ಚಂಡಮಾರುತದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿತ್ತು. ಅದರಂತೆ ನಿನ್ನೆ ರಾತ್ರಿಯಿಂದಲೇ ಭಾರೀ ಮಳೆ ಸುರಿಯುತ್ತಿದೆ.
ಮಂಗಳೂರಿನ ಅರಬ್ಬೀ ಸಮುದ್ರದ ತೀರದಲ್ಲಿ ನಿನ್ನೆಯಿಂದಲೇ ಕಡಲು ಪ್ರಕ್ಷುಬ್ಧಗೊಂಡಿದ್ದು ಸಮುದ್ರ ತೀರಕ್ಕೆ ಭಾರೀ ಗಾತ್ರದ ಅಲೆಗಳು ಬಂದು ಅಪ್ಪಳಿಸುತ್ತಿವೆ. ತೌಕ್ತೆ ಚಂಡಮಾರುತದ ಪರಿಣಾಮ ಮೀನುಗಾರರು ಕಡಲಿಗಿಳಿಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಎರಡು ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿರುವವರನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಸಮುದ್ರ ತೀರಕ್ಕೆ ಮರಳಿ ಹೋಗುವಂತೆ ಸೂಚಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಭಾರೀ ಮಳೆ ಸುರಿಯುತ್ತಿರುವುದರಿಂದ ಮರಗಳು ಧರೆಗುಳಿದ ಘಟನೆ ನಡೆದಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ.