ಮಂಡ್ಯ: ಕೊರೊನಾ ಸೋಂಕಿಗೆ ತಂದೆ – ತಾಯಿ ಸಾವನ್ನಪ್ಪಿದ್ದು, ಐದು ದಿನದ ಮಗುವೊಂದು ಅನಾಥವಾಗಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಡ್ಡೇನಹಳ್ಳಿ ನಡೆದಿದೆ. ನಂಜುಂಡೇಗೌಡ(45), ಮಮತಾ(31)ಕೊರೊನಾ ಸೋಂಕಿನಿಂದ ಮೃತಪಟ್ಟ ದಂಪತಿ.
ತುಂಬು ಗರ್ಭಿಣಿಯಾಗಿದ್ದ ಪತ್ನಿ ಮಮತಾಗೂ ಸೋಂಕು ದೃಢಪಟ್ಟಿತ್ತು. ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಗಮಂಗಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 11ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಮತಾ ಉಸಿರಾಟದ ಸಮಸ್ಯೆ ಹೆಚ್ಚಾಗಿ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ. ಇದರಿಂದ 5 ದಿನದ ಹೆಣ್ಣು ಮಗು ಅನಾಥವಾಗಿದೆ.
ಮೃತ ನಂಜುಂಡೇಗೌಡ ಸಣ್ಣಪುಟ್ಟ ಫೈನಾನ್ಸ್ ಮಾಡಿಕೊಡಿದ್ದರು. ದಂಪತಿಗಳಿಗೆ ಮದುವೆಯಾಗಿ 9 ವರ್ಷವಾದರೂ ಮಕ್ಕಳಾಗಿರಲಿಲ್ಲ. ಮಗುವಾದ ಸಂದರ್ಭದಲ್ಲಿ ತಂದೆ-ತಾಯಿ ಕೊರೊನಾ ಸೋಂಕಿಗೆ ಬಲಿಯಾಗಿರುವುದು ಮಾತ್ರ ದುರಂತ.