ಕೋಲ್ಕತ್ತಾ: ಇಂದು ಪಶ್ಚಿಮಬಂಗಾಳ ವಿಧಾನಸಭೆಗೆ ಎರಡನೇ ಹಂತದ ಮತದಾನ ನಡೆದಿದೆ. ಈವರೆಗೆ ಶೇ.65ರಷ್ಟು ಮತದಾನವಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಬಹುನಿರೀಕ್ಷಿತ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೂ ಇಂದೇ ಮತದಾನ ನಡೆಯುತ್ತಿದೆ.
ಮತದಾನದ ವೇಳೆ ಪಶ್ಚಿಮ ಬಂಗಾಳದ ಕೆಲವೆಡೆ ಹಲ್ಲೆ, ಕಲ್ಲು ತೂರಾಟದಂಥ ಪ್ರಕರಣಗಳು ವರದಿಯಾಗಿವೆ. ನಂದಿಗ್ರಾಮದಲ್ಲಿನ ಕೆಲವು ಮತಗಟ್ಟೆಗಳನ್ನು ಬಿಜೆಪಿ ಕಾರ್ಯಕರ್ತರು ವಶಕ್ಕೆ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದು, ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರು ಮತಗಟ್ಟೆಗಳನ್ನು ಸುತ್ತುವರೆದಿದ್ದು, ಮತದಾನಕ್ಕೆ ಅಡ್ಡಿ ಪಡಿಸಿದ್ದಾರೆ. ಬೆಳಗ್ಗೆಯಿಂದ ಈ ಬಗ್ಗೆ ನಾನು ಮನವಿ ಮಾಡಿಕೊಂಡರೂ ಬಿಜೆಪಿ ಕಾರ್ಯಕರ್ತರು ಮತದಾನಕ್ಕೆ ಅನುವು ಮಾಡಿಕೊಡುತ್ತಿಲ್ಲ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಒಟ್ಟು 8 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಎರಡು ಹಂತದಲ್ಲಿ ಮತದಾನ ನಡೆದಿದೆ. ಮೇ 2ರಂದು ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.