ನವದೆಹಲಿ: ದೆಹಲಿ-ಮೀರತ್ ಎಕ್ಸ್‌ಪ್ರೆಸ್ ವೇ ಇಂದು ಉದ್ಘಾಟನೆಯಾಗಿದೆ. ಈ ಎಕ್ಸ್‌ಪ್ರೆಸ್ ವೇನಿಂದ ದೆಹಲಿ ಮತ್ತು ಮೀರತ್ ನಡುವಿನ ಪ್ರಯಾಣ ಕೇವಲ 45 ನಿಮಿಷಗಳಾಗಿದೆ.
ಎರಡು ನಗರಗಳನ್ನು ಸಂಪರ್ಕಿಸುವ ಈ ಮಹತ್ವಾಕಾಂಕ್ಷಿ ಯೋಜನೆ ಪೂರ್ಣಗೊಂಡಿದ್ದು, ಗುರುವಾರದಿಂದ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. ‘ದೆಹಲಿಯಿಂದ ಮೀರತ್‌ಗೆ ತೆರಳುವ ಪ್ರಯಾಣದ ಸಮಯವನ್ನು ತಗ್ಗಿಸುವುದಾಗಿ ನೀಡಿದ್ದ ನಮ್ಮ ಭರವಸೆಯನ್ನು ನಾವು ಈಡೇರಿಸಿದ್ದೇವೆ’ ಎಂದು ರಸ್ತೆ ಹಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿ 58ರ ಮೂಲಕ ಸಂಚಾರ ಮಾಡಿ ದೆಹಲಿ ತಲುಪುತ್ತಿದ್ದರು. ಈ ಮಾರ್ಗದಲ್ಲಿ 70 ಕಿ.ಮೀ. ಸಂಚರಿಸಲು ಬರೋಬ್ಬರಿ 3 ಗಂಟೆ ಸಮಯ ಹಿಡಿಯುತ್ತಿತ್ತು.
ಈ ಎಕ್ಸ್‌ಪ್ರೆಸ್ ವೇ ಹೆದ್ದಾರಿಯು ಮುಜಫ್ಫರ್‌ನಗರ, ಸಹರಾನ್ಪುರ, ಹರಿದ್ವಾರ ಮತ್ತು ಡೆಹರಾಡೂನ್‌ನಿಂದ ದೆಹಲಿಗೆ ಇರುವ ಪ್ರಯಾಣದ ಸಮಯವನ್ನು ಕೂಡ ಕಡಿಮೆ ಮಾಡಲಿದೆ.