ಕೋಲ್ಕತ್ತಾ: ಇಂದು ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಮತದಾನ ಆರಂಭವಾಗಿದೆ. ಇಂದು ಬೆಳಗ್ಗೆ 7ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಹಲವೆಡೆ ಘರ್ಷಣೆಗಳು ಸಂಭವಿಸಿವೆ.
ಹೌರಾ, ಹೂಗ್ಲಿ, ದಕ್ಷಿಣ 24 ಪರಗಣ, ಅಲಿಪುರ್ದೌರ, ಕೂಚ್ ಬೆಹೆರ್, ಟೆಲ್ಲಿಗುಂಗೆ ಸೇರಿದಂತೆ ಕೆಲವೆಡೆ ಮತದಾನ ನಡೆಯುತ್ತಿದೆ. ಮತದಾನ ಪ್ರಾರಂಭವಾಗುತ್ತಿದ್ದಂತೆ, ಕೂಚ್ ಬೆಹರ್ ನ ಸಿತಾಲ್ಕುಚಿಯಲ್ಲಿ ಘರ್ಷಣೆಗಳು ನಡೆದವು, ಮತದಾನ ಕೇಂದ್ರದ ಹೊರಗೆ ಬಾಂಬ್ ಗಳನ್ನು ಎಸೆಯಲಾಯಿತು. ಕೂಚ್ ಬೆಹರ್ ನ ಸಿಟಾಲ್ಕುಚಿಯಲ್ಲಿ ಬೂತ್ ಸಂಖ್ಯೆ 285 ರಲ್ಲಿ ಉದ್ವಿಗ್ನತೆ ಆವರಿಸಿದೆ. ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ತಗ್ಗಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರು.
ತೃಣಮೂಲ ಕಾಂಗ್ರೆಸ್ ಶನಿವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದು, ಸಿತಾಲ್ಕುಚಿ, ನಟಾಲ್ಬರಿ, ತುಫಾನ್ ಗಂಜ್ ಮತ್ತು ದಿನ್ಹಾತಾದ ಹಲವಾರು ಬೂತ್ ಗಳಲ್ಲಿ, ಬಿಜೆಪಿ ಗೂಂಡಾಗಳು ಬೂತ್ ಹೊರಗೆ ಗದ್ದಲ ಸೃಷ್ಟಿಸುತ್ತಿದ್ದಾರೆ ಮತ್ತು ಟಿ.ಎಂ.ಸಿ ಏಜೆಂಟರು ಬೂತ್ ಪ್ರವೇಶಿಸದಂತೆ ತಡೆಯುತ್ತಿದ್ದಾರೆ ಎಂದು ಹೇಳಿದೆ.
ಈ ಪ್ರದೇಶದಲ್ಲಿ ಮತದಾನಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಟಿ.ಎಂ.ಸಿ. ಮನವಿ ಮಾಡಿತ್ತು. ಇನ್ನು, ನಾಲ್ಕನೇ ಹಂತದ ಮತದಾನದಲ್ಲಿ ಪಶ್ಚಿಮ ಬಂಗಾಳದಲ್ಲಿ ಇಂದು ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ದಾಖಲೆಯ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.