ಚಾಮರಾಜನಗರ: ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ ನನ್ನ ಪತಿ ಸಿದ್ದನಾಯ್ಕ ಅವರ ಹೆಸರನ್ನು ಸೇರಿಸಿಲ್ಲ ಎಂದು ಪತ್ನಿ ಜ್ಯೋತಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ 24 ಜನರು ಸಾವನ್ನಪ್ಪಿದ್ದರು. ಈ 24 ಜನರಿಗೆ ಸರ್ಕಾರ 2 ಲಕ್ಷ ರೂಗಳನ್ನು ಪರಿಹಾರವಾಗಿ ನೀಡಲಾಗಿದ್ದು, ನನ್ನ ಪತಿ ಸಿದ್ದನಾಯ್ಕ ಸಹಾ ಅಂದೇ ಮೃತಪಟ್ಟಿದ್ದು, ಇವರೊಂದಿಗೆ ಇನ್ನಷ್ಟು ಜನ ಮೃತಪಟ್ಟಿದ್ದು ಅವರ್ಯಾರಿಗೂ ಪರಿಹಾರ ನೀಡಿಲ್ಲ ಎಂದು ಅಳಲು ತೊಡಿಕೊಂಡರು.
ಇನ್ನು ನನ್ನ ಪತಿ ಸಿದ್ದನಾಯ್ಕ ಆಟೋ ಓಡಿಸಿ ಜೀವನ ನಡೆಸುತ್ತಿದ್ದರು. ಏಪ್ರಿಲ್ 26 ರಂದು ಆರೋಗ್ಯ ಸರಿ ಇಲ್ಲದ ಕಾರಣ ಆಸ್ಪತ್ರೆಗೆ ತೋರಿಸಲು ಬಂದಾಗ ಕೊರೊನಾ ಪಾಸಿಟಿವ್ ಬಂದಿದ್ದು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮಾರನೇಯ ದಿನ ಡಿಶ್ಚಾರ್ಜ್ ಆಗಬೇಕಿತ್ತು, ಚೆನ್ನಾಗಿದ್ದ ನನ್ನ ಪತಿಯೂ ಸಹಾ ಅಂದೇ ರಾತ್ರಿ ಆಮ್ಲಜನಕ ಸಿಗದೇ ಮೃತಪಟ್ಟರು. ಆದರೆ, ಸರ್ಕಾರ ಅಂದು ಮೃತಪಟ್ಟ 24 ಜನರಲ್ಲಿ ನನ್ನ ಪತಿಯ ಹೆಸರಿಲ್ಲದಿರುವುದು, ಇತ್ತ ನನ್ನ ಪತಿಯೂ ಇಲ್ಲ, ಅತ್ತ ಪರಿಹಾರವೂ ಇಲ್ಲ ಎಂದು ಮಾಧ್ಯಮದವರ ಮುಂದೆ ಗೋಳಾಡಿದ್ದಾರೆ. ನನ್ನ ಮಕ್ಕಳನ್ನು ನೋಡಿಕೊಳ್ಳುವವರು ಯಾರು ಎಂದು ಸರ್ಕಾರಕ್ಕೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.