ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯರ ಕಲರವ ಮುಂದುವರೆದಿದೆ. ಮತ್ತೆರಡು ಮಹತ್ವದ ಹುದ್ದೆಗಳಿಗೆ ಇಬ್ಬರು ಭಾರತೀಯ ಮೂಲದ ಮಹಿಳೆಯರನ್ನು ಆಯ್ಕೆ ಮಾಡಿ ಅಧ್ಯಕ್ಷ ಜೋ ಬೈಡನ್ ಆದೇಶ ಹೊರಡಿಸಿದ್ದಾರೆ.
ಅಟಾರ್ನಿ ಜನರಲ್ ಹಾಗೂ ಕಾರ್ಯನಿರ್ವಾಹಕ ಹುದ್ದೆಗಳಿಗೆ ಇಬ್ಬರು ಭಾರತೀಯ-ಅಮೆರಿಕನ್ ಮಹಿಳೆಯರನ್ನು ನಾಮಕರಣಗೊಳಿಸಿದ್ದೇವೆ ಎಂದು ಬೈಡೆನ್ ಹೇಳಿದ್ದಾರೆ. ಇದಕ್ಕೂ ಮುನ್ನ ಮೀರಾ ಜೋಶಿಯವರನ್ನು ಫೆಡರಲ್ ಮೋಟರ್ ಕ್ಯಾರಿಯರ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ನ ಉಪ ಆಡಳಿತಾಧಿಕಾರಿಯಾಗಿ ಬೈಡನ್ ಜನವರಿ 20ರಂದು ನೇಮಕ ಮಾಡಿದ್ದರು. ಅದೇ ದಿನ ಫೋಕ್ಸ್ ಅವರನ್ನು ನೀರು ಮತ್ತು ಪರಿಸರ ಸಂರಕ್ಷಣೆ ಏಜೆನ್ಸಿಯ ಪ್ರಧಾನ ಉಪ ಸಹಾಯಕ ಆಡಳಿತಾಧಿಕಾರಿಯಾಗಿ ನೇಮಿಸಿದ್ದರು.
ಇತ್ತೀಚಿಗಷ್ಟೇ ಅಮೆರಿಕದ ಸರ್ಜನ್ ಜನರಲ್ ಆಗಿ ಕರ್ನಾಟಕ ಮೂಲದ ಡಾ.ವಿವೇಕ್ರನ್ನು ಮತ್ತು ಫೆಡರಲ್ ಜಡ್ಜ್ ಆಗಿ ರೂಪಾ ಪುಟ್ಟಗುಂಟ ಅವರನ್ನು ಬೈಡನ್ ನೇಮಿಸಿದ್ದರು. ಅಲ್ಲದೇ ಜೋ ಬೈಡನ್ ಅವರ ಆಡಳಿತದಲ್ಲಿ ಹಲವು ಭಾರತೀಯರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಲ್ಲದೇ, ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ನಾಸಾದಲ್ಲಿ ಭಾರತೀಯ ಮೂಲದ ಮಹಿಳೆ ಉನ್ನತ ಸ್ಥಾನಕ್ಕೇರುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಮತ್ತಷ್ಟು ಮೇಲಕ್ಕೇರಿಸಿದ್ದಾರೆ.