ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪ್ರವಾಸಿ ತಾಣಗಳು, ಐತಿಹಾಸಿಕ ದೇವಾಲಗಳನ್ನು ಬಂದ್ ಮಾಡಲಾಗುತ್ತಿದೆ.
ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಐತಿಹಾಸಿಕ ತಾಣಗಳು, ಸ್ಮಾರಕಗಳು, ಮ್ಯೂಸಿಯಂ ಗಳಿಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ ವಿಧಿಸಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.
ಹಾಸನ ಜಿಲ್ಲೆಯ ಬೇಲೂರು-ಹಳೆಬೀಡು, ಶ್ರವಣಬೆಳಗೊಳ ಪ್ರವೇಶಕ್ಕೆ ಒಂದು ತಿಂಗಳು ನಿರ್ಬಂಧ ಹೇರಲಾಗಿದೆ. ಮೇ 15ರವರೆಗೆ ಐತಿಹಾಸಿಕ ದೇವಾಲಯಗಳನ್ನು ಬಂದ್ ಮಾಡಿ ಭಾರತೀಯ ಪುರಾತತ್ವ ಇಲಾಖೆ ಆದೇಶ ಹೊರಡಿಸಿದೆ.
ವಿಜಯಪುರ ಜಿಲ್ಲೆಯ ಐತಿಹಾಸಿಕ ಗೋಲಗುಮ್ಮಟಕ್ಕೂ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಏಪ್ರಿಲ್ 16ರಿಂದ ಮೇ 15ರ ವರೆಗೆ ಬಾಗಲಕೋಟೆ ಜಿಲ್ಲೆಯ ವಿಶ್ವಪ್ರಸಿದ್ಧ ಸ್ಮಾರಕ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲಿಗೆ ಸಾರ್ವಜನಿಕ ಪ್ರವೇಶವಿಲ್ಲ.
ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಚಿಕ್ಕಬಳ್ಳಾಪುರ ಜಿಲ್ಲೆ ನಂದಿ ಗ್ರಾಮದ ಶ್ರೀ ಭೋಗನಂದೀಶ್ವರ ದೇವಾಲಯವನ್ನೂ ಬಂದ್ ಮಾಡಲಾಗಿದೆ.