ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂ ಯಂತ್ರಗಳು ಪತ್ತೆ ಪ್ರಕರಣದಲ್ಲಿ ಕೇಂದ್ರ ಚುನಾವಣಾ ಆಯೋಗ ಅಸ್ಸಾಂನ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಿದೆ.
ಗುರುವಾರ ಅಸ್ಸಾಂನಲ್ಲಿ 2ನೇ ಹಂತದ ಚುನಾವಣೆ ಮುಕ್ತಾಯಗೊಂಡಿದ್ದು, ಖಾಸಗಿ ವಾಹನದಲ್ಲಿ ಇವಿಎಂ ಸಾಗಿಸುತ್ತಿರುವುದು ಪತ್ತೆಯಾಗಿತ್ತು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ತನಿಖೆ ನಡೆಸಿದಾಗ ಈ ವಾಹನ ಪತ್ರಖಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣೆಂದು ಪೌಲ್ ಗೆ ಸೇರಿದ್ದು ಎಂದು ತಿಳಿದು ಬಂದಿದೆ.
ಅಸ್ಸಾಂ ಪತ್ರಕರ್ತರೊಬ್ಬರು ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂ ಯುಂತ್ರಗಳು ಇರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಈ ವೀಡಿಯೋ ವೈರಲ್ ಆಗಿತ್ತು.
ಗುರುವಾರ ಸಂಜೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡ ನಂತರ ರಾತ್ರಿ 10.30 ಸುಮಾರಿಗೆ ಅನುಮಾನಸ್ಪದವಾಗಿ ಸಂಚರಿಸುತ್ತಿದ್ದ ಬಿಳಿ ಬಣ್ಣದ ಬೊಲೆರೊ ತಡೆದ ಸ್ಥಳೀಯರು ವಿಚಾರಣೆ ನಡೆಸಲು ಮುಂದಾಗುತ್ತಿದ್ದಂತೆ ಕಾರಿನ ಚಾಲಕ ಪರಾರಿಯಾಗಿದ್ದಾನೆ. ಕಾರನ್ನು ತಪಾಸಣೆ ಮಾಡಿದಾಗ ಒಳಗೆ ಇವಿಎಂ ಯಂತ್ರಗಳು ಪತ್ತೆಯಾಗಿವೆ.