ಒಡಿಶಾದಿಂದ ಕಳುಹಿಸಿಕೊಡಲಾದ ಎರಡನೇ ಕಂತಿನ ಆಕ್ಸಿಜನ್ ಕಂಟೈನರ್ ಶನಿವಾರ ರಾಜ್ಯಕ್ಕೆ ಬಂದಿದೆ.
120 ಮೆಟ್ರಿಕ್ ಟನ್ ಆಕ್ಸಿಜನ್ ಕಂಟೈನರ್ ಹೊತ್ತ ರೈಲು ಒಡಿಶಾದ ಕಳಿಂಗ ನಗರದಿಂದ ಬೆಂಗಳೂರಿನ ವೈಟ್ ಫೀಲ್ಡ್ ನಿಲ್ದಾಣಕ್ಕೆ ಬಂದಿಳಿದಿದೆ. 6 ಕಂಟೈನರ್ ಗಳಲ್ಲಿ 120 ಮೆಟ್ರೀಕ್ ಟನ್ ತುಂಬಿದ ಲಿಕ್ವಿಡ್ ಆಕ್ಸಿಜನ್ ಹೊತ್ತ ರೈಲು 23 ಗಂಟೆಗಳ ಪಯಣದ ನಂತರ ಬೆಂಗಳೂರಿಗೆ ಬಂದಿದೆ.
3 ದಿನಗಳ ಹಿಂದೆ ರಾಜ್ಯಕ್ಕೆ ಮೊದಲನೇ 120 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿತ್ತು. ಇದೀಗ ಒಡಿಶಾದಿಂದ ಕೇಂದ್ರ ಕಳುಹಿಸಿದೆ. ಇದನ್ನು ಸಂಜೆ ವೇಳೆಗೆ ತುರ್ತು ಅಗತ್ಯವಿರುವ ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ.
ಶನಿವಾರ ಸಂಜೆ ಮತ್ತೊಂದು ರೈಲಿನಲ್ಲಿ ಜಾರ್ಖಂಡ್ ನ ಟಾಟಾ ನಗರದಿಂದ ಎರಡನೇ ಬಾರಿಗೆ 120 ಮೆಟ್ರೀಕ್ ಟನ್ ಗಳ ಆಕ್ಸಿಜನ್ ಬರಲಿದೆ. ರಾಜ್ಯದ ಜನತೆ ಆಕ್ಸಿಜನ್ ಕೊರತೆಯಿಂದ ಬಳಲುವ ಸ್ಥಿತಿ ಕೊಂಚ ಮಟ್ಟಿಗೆ ತಪ್ಪಲಿದೆ.
ಚಾಮರಾಜನಗರ, ಕಲಬುರಗಿ ಹಾಗೂ ಬೆಳಗಾವಿಯಲ್ಲಿ ಆಕ್ಸಿಜನ್ ಕೊರತೆಯಿಂದ ಹಲವಾರು ಮಂದಿ ಮೃತಪಟ್ಟ ಘಟನೆ ನಂತರ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಮಾಡಿಕೊಂಡ ಮನವಿ ಹಿನ್ನೆಲೆಯಲ್ಲಿ ಹಾಗೂ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಮಾಡಿದೆ.