ದೇಶದಲ್ಲಿ ಕೊರೊನಾ ಲಸಿಕೆ ಅಭಾವ ಸೃಷ್ಟಿಯಾಗಲು ಕೇಂದ್ರ ಸರಕಾರ ಕೊರೊನಾ ನಿಯಂತ್ರಣದಲ್ಲಿ ಮಾಡಿದ ಎಡವಟ್ಟು ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ದೇಶದಲ್ಲಿ ಕೊರೊನಾ ಲಸಿಕೆ ಅಭಾವಕ್ಕೆ ಕೇಂದ್ರದ ಅವ್ಯವಸ್ಥೆಯೇ ಕಾರಣ. ಕೇಂದ್ರ ಟೆಸ್ಟ್, ಟ್ರ್ಯಾಕ್ ಅಂಡ್ ಲಸಿಕೆ ಕುರಿತು ಸರಿಯಾದ ಮಾರ್ಗವನ್ನೇ ಅನುಸರಿಸದೇ ಬೇಕಾಬಿಟ್ಟಿ ಹಂಚಿಕೆ ಮಾಡಿದ್ದೇ ಲಸಿಕೆ ಕೊರತೆ ಉಂಟಾಗಲು ಕಾರಣ ಎಂದು ಸೋನಿಯಾ ಆರೋಪಿಸಿದ್ದಾರೆ.
ಕಾಂಗ್ರೆಸ್ ಆಡಳಿತ ಮುಖ್ಯಮಂತ್ರಿಗಳ ಜೊತೆ ಶನಿವಾರ ಸಭೆ ನಡೆಸಿ ಕೊರೊನಾ ನಿಯಂತ್ರಣ ಕುರಿತು ಚರ್ಚಿಸಿದ ನಂತರ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಭಾರತದಲ್ಲಿ ಲಸಿಕೆ ಲಭ್ಯತೆ ಕುರಿತು ಮುಂಜಾಗೃತಾ ಕ್ರಮ ಕೈಗೊಳ್ಳದೇ ವಿದೇಶಗಳಿಗೆ ರಫ್ತು ಮಾಡಿದ್ದರಿಂದ ಲಸಿಕೆ ಅಭಾವ ಉಂಟಾಗಿದೆ ಎಂದು ಸೋನಿಯಾ ಅಭಿಪ್ರಾಯಪಟ್ಟರು.
ಪಂಜಾಬ್ ನಲ್ಲಿ 5 ದಿನಗಳಿಗೆ ಆಗುವಷ್ಟು ಮಾತ್ರ ಲಸಿಕೆ ಇದ್ದರೆ, ಚತ್ತೀಸ್ ಗಢದಲ್ಲಿ ಕೇವಲ 3 ದಿನಗಳಷ್ಟು ಸಂಗ್ರಹವಿದೆ ಎಂದು ಮುಖ್ಯಮಂತ್ರಿಗಳ ಸೋನಿಯಾ ಗಮನಕ್ಕೆ ತಂದರು.