ಹೋಟೆಲ್ ಉದ್ಯಮದಲ್ಲಿ ಆದ ನಷ್ಟದಿಂದ ಸಾಲ ತೀರಿಸಲು ಆಗದೇ ಉದ್ಯಮಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.
ಇಂಡಿಯ ಪ್ರಸಿದ್ಧ ಅಮರ್ ಹೊಟೇಲ್ ನಡೆಸುತ್ತಿದ್ದ ಮಂಗಳೂರು ಮೂಲದ ಗಣೇಶ್ ನೇಣಿಗೆ ಶರಣಾಗಿದ್ದಾರೆ.
30 ಲಕ್ಷ ರೂ.ಗೂ ಅಧಿಕ ಸಾಲ ಮಾಡಿಕೊಂಡಿದ್ದ ಗಣೇಶ, ಬಾಡಿಗೆ ಪಡೆದು ಹೊಟೇಲ್ ನಡೆಸುತ್ತಿದ್ದರು. ಆದರೆ ವ್ಯಾಪಾರ ಸರಿಯಾಗಿ ಆಗದೇ ಸಾಲದ ಬಡ್ಡಿ ಕಟ್ಟಲು ಪರದಾಡುತ್ತಿದ್ದರು ಎನ್ನಲಾಗಿದೆ.
ಕೋವಿಡ್ ಕಾರಣದಿಂದ ಹೊಟೇಲ್ ಉದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿತ್ತು. ಹೊಟೇಲ್ ನಡೆಸಲು ಪಡೆದ ಸಾಲ ತೀರಿಸಲಾಗದಷ್ಟು ನಷ್ಟ ಉಂಟಾಗಿದ್ದು, ಹತಾಶೆಗೊಂಡ ಗಣೇಶ್ ಹೊಟೇಲ್ ರೂಂ ನಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಇಂಡಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.