ಸರಕಾರದ ಮಾರ್ಗಸೂಚಿ ಎಲ್ಲೆಡೆ ಸರಿಯಾಗಿ ಪಾಲನೆಯಾಗುತ್ತಿಲ್ಲ ನಿಜ. ಆದರೆ ಎಲ್ಲವನ್ನೂ ನಾನೇ ಮಾಡಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸ್ ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಜನರು ಗುಂಪಾಗಿ ಸೇರುತ್ತಿದ್ದಾರೆ. ಆದರೆ ಆರೋಗ್ಯ ಸಚಿವನಾಗಿ ಏನು ಮಾಡಬೇಕೋ ಅದನ್ನ ಮಾಡಬಹುದು. ಎಲ್ಲವನ್ನೂ ನಾನೇ ಹೋಗಿ ನೋಡಲು ಸಾಧ್ಯವಿಲ್ಲ ಎಂದರು.
ಮಹಾರಾಷ್ಟ್ರದಲ್ಲಿ ಒಂದೇ ದಿನ 50 ಸಾವಿರ ಸೋಂಕಿನ ಪ್ರಕರಣ ದಾಖಲಾಗಿದೆ. 500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ರೀತಿಯ ಪರಿಸ್ಥಿತಿ ರಾಜ್ಯದಲ್ಲಿ ಆಗದಂತೆ ನೋಡಿಕೊಳ್ಳಬೇಕಿದೆ. ಇಲ್ಲದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಕಷ್ಟವಾಗಲಿದೆ ಎಂದು ಅವರು ಹೇಳಿದರು.
ಆರೋಗ್ಯ ಸಚಿವ ಸುಧಾಕರ್ ಖಾತೆ ಬದಲಾಯಿಸಿ ಎಂಬ ನಿರ್ಮಾಪಕ ಕೆ.ಮಂಜು ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕೆ. ಮಂಜು ಅಂದರೆ ಯಾರೂ ಅಂತಾನೆ ನನಗೆ ಗೊತ್ತಿಲ್ಲ. ಯಾರ ಟೀಕೆಗಳ ಬಗ್ಗೆಯೂ ತಲೆ ಕೆಡಿಸಿಕೊಳ್ಳೋದಿಲ್ಲ. ಆರೋಗ್ಯ ಸಚಿವನಾಗಿ ಏನು ಮಾಡಬೇಕೋ ಅದನ್ನ ಮಾಡ್ತಿದ್ದೇನೆ. ನಮಗೆ ಜನರ ರಕ್ಷಣೆ ಬಹಳ ಮುಖ್ಯ ಎಂದು ಅವರು ನುಡಿದರು.
ಸರ್ಕಾರ ಎಲ್ಲವನ್ನೂ ಸರಿದೂಗಿಸಬೇಕಾಗುತ್ತೆ. ಹಾಗಾಗಿ ಸಿಎಂ ಚಿತ್ರರಂಗದ ಮನವಿಗೆ ಸ್ಪಂದಿಸಿದ್ದಾರೆ. ಇದು ತಪ್ಪು ಅಂತಾನೂ ಹೇಳೋದಿಲ್ಲ. ಆದರೆ, ಈಗ ಕಠಿಣ ಕ್ರಮ ಕೈಗೊಳ್ಳದೇ ಇದ್ರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತೆ ಎಂದು ಸುಧಾಕರ್ ಸ್ಪಷ್ಟಪಡಿಸಿದರು.