ಬೆಂಗಳೂರು: ವಿಶ್ವಾದ್ಯಂತ ಝಾಂಬೀ ಸೀರೀಸ್ ಸಿನಿಮಾಗಳು ತನ್ನದೇ ಪ್ರೇಕ್ಷಕ ಬಳಗವನ್ನು ಹೊಂದಿವೆ. ಝಾಂಬೀ ಸಿನಿಮಾಗಳು ಎಂದ ಕೂಡಲೇ ಎಲ್ಲರಿಗೂ ಹಾಲಿವುಡ್ ತಕ್ಷಣಕ್ಕೆ ನೆನಪಿಗೆ ಬರುತ್ತದೆ. ಆದರೆ ಇನ್ನುಮುಂದೆ ಹೀಗಾಗಲ್ಲ. ಕನ್ನಡ ಸಿನಿರಂಗದ ಇತಿಹಾಸದಲ್ಲಿಯೇ ಮೊದಲ ಬಾರಿ ‘ಝಾಂಬೀ’ ಆಧಾರಿತ ಚಿತ್ರ ತೆರೆಗೆ ಬರಲಿದೆ.
ಹೌದು, ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡದಲ್ಲೂ ‘ಝಾಂಬೀ’ ಆಧಾರಿತ ಚಿತ್ರವನ್ನು ನೋಡಿ ಎಂಜಾಯ್ ಮಾಡಬಹುದು. ಆನ ಮತ್ತು ಬ್ಯಾಂಗ್ ಚಿತ್ರಕ್ಕೆ ಕೆಲಸ ಮಾಡಿರುವ ಆನಂದ್ ರಾಜ್ ಅವರು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಆನ ನಿರ್ದೇಶಕ ಮನೋಜ್ ಪಿ ನಡಲುಮನೆ ಅವರು ಈ ಸಿನಿಮಾಗೆ ಕಥೆ ಬರೆದಿದ್ದಾರೆ.
ರನ್ವಿತ್ ಶಿವಕುಮಾರ್ ಈ ಬಾರಿ ನಟನೆಯ ಜೊತೆಗೆ ಕ್ರಿಯೇಟಿವ್ ಹೆಡ್ ಆಗಿ ಸಿನಿಮಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಕನ್ನಡ ಸಿನಿರಂಗದಲ್ಲಿಯೇ ಮೊದಲ ಪ್ರಯತ್ನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಿನಿಮಾ ತುಂಬಾನೇ ರಿಚ್ ಆಗಿಯೇ ನಿರ್ಮಾಣವಾಗಲಿದೆ ಎಂದು ಚಿತ್ರತಂಡ ಹೇಳಿದೆ. ‘ಆನಾ’ ಸಿನಿಮಾದ ಟೀಮ್ ಈ ಸಿನಿಮಾದಲ್ಲೂ ಕೆಲಸ ಮಾಡಲಿರುವುದು ವಿಶೇಷ.
ಇನ್ನು ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎಂಬುದರ ಬಗ್ಗೆ ಚಿತ್ರತಂಡ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದೆ ಎನ್ನಲಾಗಿದೆ. ಮುಂದಿನ ತಿಂಗಳಾಂತ್ಯದ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ಹೇಳಿದೆ. ಹೊಸಬರ ಟೀಮ್ ನಿಂದಲೇ ಇಂತಹ ಅದ್ಭುತ ಪ್ರಯೋಗಗಳಾಗುತ್ತಿದ್ದು, ಸಹಜವಾಗಿಯೇ ಸಿನಿಮಾ ತಂಡದ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.
ಸಾಮಾನ್ಯವಾಗಿ ಈ ಝಾಂಬೀ ಕಥೆಗಳಲ್ಲಿ ವೈರಸ್ ಇರುವ ವ್ಯಕ್ತಿ ಮತ್ತೊಬ್ಬರಿಗೆ ಕಚ್ಚಿದಾಗ ಅವರೂ ಸಹ ರಕ್ತಪಿಶಾಚಿ ಅಥವಾ ಝಾಂಬೀ ರೀತಿ ಆಗಿ ಬೇರೆಯವರನ್ನ ಬೇಟೆಯಾಡಲು ಹೋಗುತ್ತಾರೆ. ಈ ರೀತಿಯಾದ ಸಿನಿಮಾಗಳು ಈಗಿನ ಜೆನರೇಷನ್ ನ ಮಕ್ಕಳು ಹಾಗೂ ಯೂತ್ಸ್ ಗೆ ತುಂಬಾನೆ ಇಷ್ಟವಾಗುತ್ತೆ.