ಮದುವೆ ಆಗಿ 3 ತಿಂಗಳಿಗೆ ನವ ವಿವಾಹಿತೆ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಮಣ್ಣಾಗಿದ್ದ ಮಹಿಳೆಯ ಶವವನ್ನು 11 ದಿನಗಳ ನಂತರ ಹೊರತೆಗೆದು ಶವಪರೀಕ್ಷೆಗೆ ಕಳುಹಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ತಾಲೂಕಿನ ಕ್ಯಾಲನೂರು ಗ್ರಾಮದ 22 ವರ್ಷದ ಇಜಾರ್ ಎಂಬ ನವ ವಿವಾಹಿತೆ ಸಾವಿನ ತನಿಖೆಯನ್ನು ತಹಶೀಲ್ದಾರ್ ನೇತೃತ್ವದಲ್ಲಿ ಕೈಗೊಳ್ಳಲಾಗಿದ್ದು, ಶವದ ಸ್ಯಾಂಪಲ್ಸ್ ಗಳನ್ನು ಸಂಗ್ರಹಿಸಿ ಎಫ್ಎಸ್ಐಲ್ ಗೆ ಕಳುಹಿಸಿಕೊಡಲಾಗಿದೆ.
ಯುವತಿಯ ಅಂದಕ್ಕೆ ಮನಸೋತ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಗಿಡ್ಡಪನಹಳ್ಳಿ ಮೂಲದ ಶಾಬುದ್ದೀನ್ ಕಳೆದ ನವಂಬರ್ ತಿಂಗಳಲ್ಲಿ ಮದುವೆಯಾಗಿದ್ದ. ಮದುವೆಯ ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ ಆತನ ತಲೆಗೆ ವರದಕ್ಷಿಣೆ ಅನ್ನೋ ಭೂತ ತುಂಬಿದ್ದ ತಾಯಿ ಯಾಸ್ಮಿನ್ ತಾಜ್ ಹಾಗೂ ತಂಗಿ ಸುಮೇರಾ ಸಂಸಾರವನ್ನೇ ಒಡೆದು ಹಾಕಿದರು. ಪ್ರತಿದಿನ ಒಂದಲ್ಲಾ ಒಂದು ವಿಚಾರಕ್ಕೆ ಕ್ಯಾತೆ ತೆಗೆದು ಇಜಾರ್ ಮೇಲೆ ಹಲ್ಲೆ ಆಗುತ್ತಿತ್ತು. ಅದೆಷ್ಟೋ ಬಾರಿ ತವರೂ ಮನೆಗೆ ವಾಪಸ್ಸು ಕಳುಹಿಸಿದ್ದರು.
ಎಲ್ಲ ನೋವುಗಳನ್ನು ನುಂಗಿ ಮತ್ತೆ ಗಂಡನ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ಇಜಾರ್ ಮಾಚ್೯ 16 ನೇ ತಾರಿಖು ಗಂಡನ ಮನೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವನಪ್ಪಿದ್ದಾಳೆ. ಇದು ಆತ್ಮಹತ್ಯೆ ಅಂತ ವೈದ್ಯರು ಸಹ ಶವ ಪರೀಕ್ಷೆಯಲ್ಲಿ ವರದಿ ನೀಡಿದ್ದು, ಇಲ್ಲ ಇದು ಕೊಲೆ ಅಂತ ಸಂಶಯದಿಂದ 11 ದಿನಗಳ ಹಿಂದೆ ಮಣ್ಣು ಮಾಡಿದ್ದ ಶವವನ್ನು ಹೊರ ತೆಗೆದು ಮತ್ತೆ ಪರೀಕ್ಷೆ ಮಾಡಿಸಿದ್ದಾರೆ.
ನಿಮ್ಮ ಮಗಳನ್ನು ಮುಗಿಸುತ್ತೇವೆ ಅಂತ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಅಂತ ಪೋಷಕರು ಕೋಲಾರ ತಹಶೀಲ್ದಾರ್ ಶೋಭಿತಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದು ಮತ್ತೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ.