ಬೀದರ್: ನಾವು ಬೇರೆ ಬೇರೆ ರಾಜ್ಯಗಳಲ್ಲಿ ಸಾರಿಗೆ ಇಲಾಖೆಯ ನೌಕರರಿಗೆ ಕೊರೊನಾ ನೆಪವೊಡ್ಡಿ ಶೇಕಡಾ 20 ರಿಂದ 30 ರಷ್ಟು ಸಂಬಳ ಕಟ್ ಮಾಡಿದ್ದಾರೆ. ಆದರೆ, ನಾವು ಮಾಡಿಲ್ಲ. ಕೊರೋನಾ ಸೋಂಕು ಬರುವುದಕ್ಕಿಂತ ಮುಂಚೆ ನಮ್ಮ ಬಸ್ಗಳಲ್ಲಿ ದಿನಕ್ಕೆ 1 ಕೋಟಿಯಷ್ಟು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಆದರೆ, ಈಗ ಒಂದು ದಿನಕ್ಕೆ 60 ಲಕ್ಷ ಜನ ಮಾತ್ರ ಪ್ರಯಾಣಿಸುತ್ತಿದ್ದಾರೆ ಎಂದು ಸಾರಿಗೆ ಸಚಿವ ಲಕ್ಷಣ್ ಸವದಿ ಹೇಳಿದ್ದಾರೆ.
ಬಸವಕಲ್ಯಾಣದಲ್ಲಿ ಮಾತನಾಡಿದ ಅವರು, ಈಗ ಬರುತ್ತಿರುವ ಆದಾಯದಿಂದ ಸಂಬಳಕ್ಕೆ ಮತ್ತು ಇಂಧನಕ್ಕೂ ಹಣ ಕೊರತೆಯಾಗುತ್ತಿದೆ. ಈ ಹಣದ ಕೊರತೆ ನೀಗಿಸಲು ಸರಕಾದಿಂದ 1,962 ಕೋಟಿ ಹಣ ಪಡೆದು ನೌಕರರಿಗೆ ಸಂಬಳ ಕೊಡಲಾಗಿದೆ. ಇನ್ನು ಇಂತಹ ಪರಿಸ್ಥಿತಿಯಲ್ಲಿ ಸಂಬಳ ಪರಿಷ್ಕರಣ ಮಾಡಿದ್ರೆ ವರ್ಷಕ್ಕೆ 1 ಸಾವಿರ ಕೋಟಿ ಹೊರೆಯಾಗಲಿದೆ ಎಂದು ತಿಳಿಸಿದರು.
ಕೊರೋನಾ ಆರ್ಥಿಕ ಸಂಕಷ್ಟದ ಬಗ್ಗೆ ನೌಕರರು ಅರ್ಥ ಮಾಡಿಕೊಳ್ಳಬೇಕು. ಅಲ್ಲದೇ ಈಗ ಉಪ ಚುನಾವಣೆ ಘೋಷಣೆಯಾಗಿದೆ. ಉಪ ಚುನಾವಣೆಯ ನೀತಿ ಸಂಹಿತೆ ಕೂಡ ಇದೆ. ಹೀಗಾಗಿ ಸಾರಿಗೆ ನೌಕರರ ಬೇಡಿಕೆಗಳನ್ನು ಮೇ.4 ರವರೆಗೆ ಯಾವುದೇ ನಿರ್ಧಾರಕ್ಕೆ ಬರುವುದಕ್ಕೆ ಆಗುವುದಿಲ್ಲ. ಮೇ. 4 ರ ನಂತರ ಸಾರಿಗೆ ನೌಕರರ ಬೇಡಿಕೆ ಕುರಿತಂತೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಸಾರಿಗೆ ನೌಕರರ ಬೇಡಿಕೆ ಕುರಿತಂತೆ ಈಗಾಗಲೇ 6 ಬಾರಿ ನಾಲ್ಕು ಮುಖಂಡರ ಜೊತೆಗೆ ಸಭೆ ನಡೆಸಿ, ಚರ್ಚಿಸಲಾಗಿದೆ. ಸಿಎಂ ಜೊತೆಗೂ ಒಂದು ಸತ್ತಿನ ಮಾತುಕತೆ ಆಗಿದೆ. ಈಗಲೂ ನಾಲ್ಕು ನಿಗಮದ ಮುಖ್ಯಸ್ಥರ ಸಭೆಯನ್ನು ಕರೆದಿದ್ದೇವೆ. ಕೂತು ಮಾತನಾಡೋಣ. ನಾಳೆ ಮುಷ್ಕರವನ್ನು ನಡೆಸುವುದು ಬೇಡ ಎಂದು ಸಚಿವರು ಮನವಿ ಮಾಡಿದ್ದಾರೆ.