ರಿಯಾದ್: ಮೆಕ್ಕಾ-ಮದೀನಾ ಯಾತ್ರೆ ಕೈಗೊಳ್ಳಲು ಕಡ್ಡಾಯವಾಗಿ ಕೋವಿಡ್ ಲಸಿಕೆಯನ್ನು ಪಡೆದಿರಬೇಕು. ಎರಡೂ ಡೋಸ್ ಲಸಿಕೆಯನ್ನು ಪಡೆದವರಿಗೆ ಮಾತ್ರ ಮೆಕ್ಕಾ-ಮದೀನಾ ಪ್ರವೇಶಕ್ಕೆ ಅನುಮತಿ ನಿಡಲಾಗುತ್ತದೆ ಎಂದು ಸೌದಿ ಅರೇಬಿಯಾ ಸರ್ಕಾರ ಹೇಳಿದೆ.
ಪವಿತ್ರ ರಂಜಾನ್ ತಿಂಗಳಿನಿಂದ ಆರಂಭವಾಗುವ ಮೆಕ್ಕಾ-ಮದೀನಾ ಯಾತ್ರೆಯ ಸಂದರ್ಭದಲ್ಲಿ ಕೋವಿಡ್ ಸೋಂಕು ಹೆಚ್ಚಾಗುವುದನ್ನು ತಪ್ಪಿಸಲು ಈ ನಿಲುವು ತಾಳಲಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಕೋವಿಡ್ 19 ಲಸಿಕೆಯ ಎರಡೂ ಡೋಸ್ಗಳನ್ನು ಪಡೆದವರು, ಮೊದಲ ಡೋಸ್ ಪಡೆದು 14 ದಿನ ಪೂರೈಸಿದವರು, ಕೋವಿಡ್ ಸೋಂಕಿಗೆ ಒಳಗಾಗಿ ಗುಣಮುಖರಾದವರನ್ನು ಸೋಂಕಿನ ವಿರುದ್ಧ ಪ್ರತಿಕಾಯಗಳನ್ನು ಹೊಂದಿರುವವರು ಎಂದು ಪರಿಗಣಿಸಲಾಗುತ್ತದೆ ಎಂದು ಸೌದಿಯ ಹಜ್ ಮತ್ತು ಯಾತ್ರಾ ಸಚಿವಾಲಯ ಹೇಳಿದೆ.
ಸೌದಿ ಅರೇಬಿಯಾದಲ್ಲಿ ಕೋವಿಡ್ನಿಂದಾಗಿ ಈವರೆಗೆ 3,93,000ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಸುಮಾರು 50ಲಕ್ಷಕ್ಕೂ ಅಧಿಕ ನಾಗರಿಕರಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ.