ರಾತ್ರಿ ಮಸೀದಿಗೆ ನುಗ್ಗಿದ ಮೂವರು ದುಷ್ಕರ್ಮಿಗಳು ಧರ್ಮಗುರುವಿನ ಹಲ್ಲೆ ಮಾಡಿದ ಘಟನೆ ಮಂಗಳೂರಿನ ಫರಂಗಿಪೇಟೆಯಲ್ಲಿ ನಡೆದಿದೆ.
ಫರಂಗಿಪೇಟೆ-ಅಮ್ಮೆಮಾರ್ ರಸ್ತೆಯಲ್ಲಿರುವ ಬಿರ್ರುಲ್ ವಾಲಿದೈನ್ ಮಸೀದಿಗೆ ನುಗ್ಗಿ ಧರ್ಮಗುರುವಾದ ಕುಂದಾಪುರ ನಿವಾಸಿ ಮುಸ್ತಾಕ್ ಹಲ್ಲೆ ಮಾಡಲಾಗಿದ್ದು, ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳುವ ವೇಳೆ ಧರ್ಮಗುರು ಕಾಲಿಗೆ ಗಾಯ ಆಗಿದ್ದು, ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ರಾತ್ರಿ 12 ಗಂಟೆಯ ಸುಮಾರಿಗೆ ಮಸೀದಿಗೆ ನುಗ್ಗಿದ್ದ ಮೂವರು ದುಷ್ಕರ್ಮಿಗಳು, ಮಸೀದಿಯ 2ನೇ ಮಹಡಿಯಲ್ಲಿ ಮಲಗಿದ್ದ ಮುಸ್ತಾಕ್ ಅವರ ಕತ್ತು ಹಿಡಿದು ಹಲ್ಲೆ ನಡೆಸಿದ್ದಾರೆ. ಕಿಡಿಗೇಡಿಗಳನ್ನು ದೂಡಿ ಹಾಕಿ ತಪ್ಪಿಸಿಕೊಂಡು ಕೆಳ ಅಂತಸ್ತಿಗೆ ಓಡುವಾಗ ಬಿದ್ದು ಧರ್ಮಗುರು ಕಾಲಿಗೆ ಗಾಯ ಆಗಿದೆ.
ಮಸೀದಿಯ ಸಿಸಿ ಕ್ಯಾಮರಾದಲ್ಲಿ ದುಷ್ಕರ್ಮಿಗಳು ಮಸೀದಿಯೊಳಗೆ ನುಗ್ಗಿರುವ ದೃಶ್ಯ ಸೆರೆಯಾಗಿದ್ದು, ಮೂವರು ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿದ್ದರಿಂದ ಗುರುತು ಪತ್ತೆಯಾಗಿಲ್ಲ.
ಮಸೀದಿ ಅಧ್ಯಕ್ಷ ಸೈಯದ್ ಬಾವಾ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.