ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ ಟೀಕಿಸಿರುವುದನ್ನು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಿಶ್ವನಾಥ ಅವರು ಹಿರಿಯ ರಾಜಕಾರಣಿ ಇದ್ದಾರೆ, ಮೇಲಾಗಿ ಅಡಳಿತ ಪಕ್ಷದ ಪರಿಷತ್ತಿನ ಸದಸ್ಯರು, ಹೀಗಿದ್ದರೂ ಕೂಡ ಸರ್ಕಾರದ ಮತ್ತು ಮುಖ್ಯ ಮಂತ್ರಿಗಳ ವಿರುದ್ಧ ಮಾಧ್ಯಮದ ಮೂಲಕ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದು ಅವರ ಘನತೆಗೆ ತಕ್ಕದಲ್ಲ ಎಂದು ಹೇಳಿದರು.
ಯಡಿಯೂರಪ್ಪನವರು ಈ ಇಳಿವಯಸ್ಸಿನಲ್ಲೂ ದೇವರ ಕೃಪೆಯಿಂದ ಅರೋಗ್ಯವಾಗಿ ಇದ್ದು ಸರಕಾರವನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೆ. ನಮ್ಮ ಎಲ್ಲಾ ಸಚಿವರ ಸಹಕಾರ ಅವರಿಗೆ ಸಂಪೂರ್ಣವಾಗಿ ಇದೆ. ಕೊರೊನಾ ನಿಯಂತ್ರಣಕ್ಕೆ ನಾವೆಲ್ಲರೂ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇವೆ ಎಂದರು.
ಮೂರು ಮುಖ್ಯಮಂತ್ರಿಗಳ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ವಿಶ್ವನಾಥ ಅವರಿಗೆ ಇದೆ. ಇಂತಹ ಸಂದರ್ಭಗಳಲ್ಲಿ ಅವರ ಮುಖ್ಯಮಂತ್ರಿಗಳಿಗೆ ಮತ್ತು ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡುವುದರ ಜೊತೆಗೆ ಕೈಜೋಡಿಸಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಬಹಿರಂಗವಾಗಿ ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡಿ ತಮ್ಮ ಗೌರವವನ್ನು ತಾವೇ ಕಡಿಮೆ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಸಚಿವರು ಹೇಳಿದರು.