ಮಂಡ್ಯ: ಜಿಲ್ಲೆಯ ರೈತರಿಗೆ ತೊಂದರೆಯಾಗದಂತೆ ಮುಂದಿನ ದಿನಗಳಲ್ಲಿ ಹೊಸ ತಂತ್ರಜ್ಞಾನ ಬಳಸಿ ವಿ.ಸಿ ನಾಲೆಯ ಆಧುನೀಕರಣಕ್ಕೆ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಣಗೌಡ ಹೇಳಿದರು.
ಕೆ.ಆರ್.ಎಸ್ ನಲ್ಲಿ ನಡೆದ ವಿ.ಸಿ ನಾಲೆ ಆಧುನೀಕರಣ ಕಾಮಗಾರಿ ಪ್ರಾರಂಭಿಸುವ ಬಗ್ಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು. ಆನ್ ಆಂಡ್ ಆಫ್ ವಿಧಾನದ ಮೂಲಕ ಕಾಮಗಾರಿಯನ್ನು ಪ್ರಾರಂಭಿಸುತ್ತೇವೆ. ಚಿಕ್ಕ ಕಾಲುವೆಗಳನ್ನು ಪರಿಶೀಲಿಸಿ ಕಾಮಗಾರಿ ನಡೆಸಿ, ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದರು.
ಮೇಕೆದಾಟು ಯೋಜನೆ ಸಂಬಂಧ ಪಾಂಡವಪುರ ಮಳವಳ್ಳಿಯ ಅರಣ್ಯ ಪ್ರದೇಶಕ್ಕೆ ತೊಂದರೆಯಾಗದಂತೆ ಕ್ರಮವಹಿಸಲಾಗುವುದು. ಒಟ್ಟಾರೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಕಾಮಗಾರಿಗಳ ಆಧುನೀಕರಣಕ್ಕೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಶ್ರೀನಿವಾಸ್, ಸಿ.ಎಸ್ ಪುಟ್ಟರಾಜು, ಅನ್ನದಾನಿ, ಸುರೇಶ್ ಗೌಡ, ವಿಧಾನಪರಿಷತ್ ಶಾಸಕರಾದ ಕೆ.ಟಿ ಶ್ರೀಕಂಠೇಗೌಡ, ಅಪ್ಪಾಜೀಗೌಡ, ಜಿಲ್ಲಾಧಿಕಾರಿ ಎಸ್.ಅಶ್ವಥಿ, ಜಿ.ಪಂ ಸಿ.ಇ.ಓ ಜುಲ್ಪಿಕರ್ ಉಲ್ಲಾ, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ರೈತ ಮುಖಂಡರುಗಳು, ಮತ್ತಿತರರು ಉಪಸ್ಥಿತರಿದ್ದರು.