ಮಂಡ್ಯ : ಜಿಲ್ಲೆಯ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೋವಿಡ್ – 19 ತಡೆಗಟ್ಟಲು ಮಾಡುತ್ತಿರುವ ಕಾರ್ಯವನ್ನು ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಶ್ಲಾಘಿಸಿದರು. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಚೇರಿಗೆ ತೆರಳಿ ಮೆಡಿಸಿನ್ ಕಿಟ್ ವಿತರಣೆ ಮಾಡಿದರು. ಈ ವೇಳೆ ಪಕ್ಷದ ಕಾರ್ಯಕರ್ತರು ಮಾಡುತ್ತಿರುವ ಅನೇಕ ಮಹತ್ತರ ಕಾರ್ಯಗಳನ್ನು ನೆನೆದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾನು ಹಾಗೂ ಮಂಡ್ಯ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ಅವರೊಂದಿಗೆ ಸೇರಿಕೊಂಡು ಸತತವಾಗಿ ಜಿಲ್ಲೆಯಾದ್ಯಂತ ಓಡಾಡಿ ಕೆಲಸ ಮಾಡುತ್ತಿದ್ದೇವೆ. ತಿಂಗಳಿನಿಂದ ಜಿಲ್ಲೆಯಲ್ಲೇ ವಾಸ್ತವ್ಯ ಮಾಡಿದ್ದೇನೆ. ಪ್ರತಿದಿನ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಖುದ್ದು ಅವಲೋಕಿಸುತ್ತಿದ್ದೇನೆ. ನಿಮ್ಮೊಂದಿಗೆ ನಾನು ಕೂಡ ಸೇವಕನಾಗಿ ದುಡಿಯುತ್ತಿದ್ದೇನೆ ಎಂದರು.
ಪ್ರತಿಯೊಬ್ಬರು ಮಾಡುವ ಒಳ್ಳೆ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಿದ್ದೇನೆ. ಕೊರೊನಾ ಬಗ್ಗೆ ನಾವು ಭಯಪಡಬಾರದು, ಆದರೆ ಮುನ್ನೆಚ್ಚರಿಕೆ ಅಗತ್ಯ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ. ಜಿಲ್ಲೆಯಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲಿರುಳು ಕೊರೊನಾ ತಡೆಗಟ್ಟಲು ಹಾಗೂ ಕೊರೊನಾ ಸೋಂಕಿತರ ಶುಶ್ರೂಷೆಗೆ ಶ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಜಾತಿ-ಮತ, ಪಕ್ಷ ಬೇಧವಿಲ್ಲದೆ ನಾವೆಲ್ಲ ಒಂದಾಗಿ ಕೆಲಸ ಮಾಡಬೇಕು. ಗಾಳಿ ಮಾತಿಗೆ ಕಿವಿಗೊಡದೆ ಕೊರೊನಾವನ್ನು ಸಂಪೂರ್ಣ ನಿಯಂತ್ರಿಸಲು ಕೆಲಸ ಮಾಡೋಣ ಎಂದು ಸಚಿವರು ಹೇಳಿದರು.
ರಾಜಕಾರಣ ಮಾಡುವ ಸಂದರ್ಭದಲ್ಲಿ ರಾಜಕಾರಣ ಮಾಡೋಣ. ಯಾರೇ ರಾಜಕೀಯದ ಬಗ್ಗೆ ಮಾತನಾಡಿದರು ಆ ಬಗ್ಗೆ ಕಿವಿಗೊಡದೆ, ನಮ್ಮ ಕೆಲಸವನ್ನು ನಾವು ಶೃದ್ಧೆಯಿಂದ ಮಾಡೋಣ. ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜನರ ನೆರವಿಗೆ ಮುಂದಾಗಬೇಕು. ನಾನು ಕೂಡ ವೈಯಕ್ತಿಕವಾಗಿ ಮೆಡಿಸಿನ್ ಕಿಟ್ ಹಾಗೂ ದಿನಸಿಕಿಟ್‍ಗಳನ್ನು ಸಿದ್ದಪಡಿಸಿದ್ದೇನೆ. ಒಂದೆರಡು ದಿನಗಳಲ್ಲಿ ಅದನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇನೆ. ಯಾರಿಗಾದರು ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿ. ಸೂಕ್ತ ಚಿಕಿತ್ಸೆ ಜೊತೆಗೆ ಉತ್ತಮ ಆಹಾರವನ್ನೂ ನೀಡಲಾಗುತ್ತಿದೆ. ಯಾವುದೋ ಗಾಳಿ ಮಾತಿಗೆ ಸೊಪ್ಪು ಹಾಕದೆ ಕೊರೊನಾ ನಿಯಂತ್ರಣಕ್ಕೆ ಬದ್ದರಾಗಿ ಶ್ರಮಿಸೋಣ. ಜಿಲ್ಲೆಯಲ್ಲಿ ಯಾರಿಗಾದರು ಮೆಡಿಸಿನ್ ಮತ್ತು ಆಹಾರದ ಕಿಟ್ ಅಗತ್ಯವಿದ್ದಲ್ಲಿ ತಮ್ಮ ಕಚೇರಿಯನ್ನು ಸಂಪರ್ಕಿಸಿ ಎಂದು ಸಚಿವರು ಮನವಿ ಮಾಡಿದರು.