ನವದೆಹಲಿ: ಪರೀಕ್ಷೆಗಳು ಜೀವನದ ಸವಾಲು ಎದುರಿಸಲು ಅವಕಾಶ ಇದ್ದಂತೆ. ವಿದ್ಯಾರ್ಥಿಗಳಿಗೆ ಬಯ್ಯುವ ಬದಲು ಶಿಕ್ಷಕರು ಮಾರ್ಗದರ್ಶನ ನೀಡಬೇಕು. ಮಕ್ಕಳು ತಮ್ಮ ಎನರ್ಜಿಯನ್ನು ಸಮಾನವಾಗಿ ಹಂಚಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಕುರಿತಾಗಿ ಸಂವಾದ ನಡೆಸಿದ್ದು, ಹಲವು ಸಲಹೆ ನೀಡಿದ್ದಾರೆ. ಒತ್ತಡ ಮುಕ್ತ ಪರೀಕ್ಷೆಗಳಿಗೆ ಆದ್ಯತೆ ನೀಡಬೇಕಿದೆ. ಮಕ್ಕಳಿಗೆ ಪರೀಕ್ಷೆ ಬಗ್ಗೆ ಭಯವಿಲ್ಲ. ಆದರೆ, ಒತ್ತಡದಿಂದ ಭಯಗೊಳ್ಳುತ್ತಾರೆ. ಪೋಷಕರು, ಶಿಕ್ಷಕರು ಪರೀಕ್ಷೆಯ ಬಗ್ಗೆ ಸೂಕ್ತವಾದ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದ್ದಾರೆ.
ಪರೀಕ್ಷೆಗಳು ಜೀವನದ ಸವಾಲು ಎದುರಿಸಲು ಸಿಕ್ಕ ಅವಕಾಶವಾಗಿದೆ. ಪರೀಕ್ಷೆಯೇ ಜೀವನದ ಕೊನೆಯ ಅವಕಾಶವಲ್ಲ. ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಯಾವುದೇ ಭಯ ಬೇಡ, ಮಕ್ಕಳ ಮೇಲೆ ಹೆಚ್ಚು ಒತ್ತಡ ಹೇರಬಾರದು ಎಂದರು.
ಯಾರು ಜೀವನದಲ್ಲಿ ಸಫಲತೆಯನ್ನು ಕಂಡಿರುತ್ತಾರೋ ಅವರು ಎಲ್ಲಾ ವಿಷಯಗಳಲ್ಲಿ ಪಾರಂಗತರಾಗಿರುತ್ತಾರೆ ಎಂಬುದು ಸುಳ್ಳು, ಆದರೆ ಯಾವುದೋ ಒಂದು ವಿಷಯದಲ್ಲಿ ಅವರು ಎಲ್ಲರಿಗಿಂತಾ ಹೆಚ್ಚು ಹಿಡಿತ ಸಾಧಿಸಿರುತ್ತಾರೆ. ನಮ್ಮ ಆಲೋಚನೆಗಳು ಹಾಗೂ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಒಂದು ದಾರಿಯನ್ನು ಕಂಡುಕೊಳ್ಳಬೇಕು. ನೀವು ಸಮಯವನ್ನು ಸದ್ಬಳಕೆ ಮಾಡಿಕೊಂಡರೆ ಜೀವನದ ಮೌಲ್ಯ ಅರ್ಥವಾಗುತ್ತದೆ ಎಂದು ಹೇಳಿದರು.