ಹೈದರಾಬಾದ್: ಇಂದು ನಟ ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸ್ಟೈಲಿಶ್ ಸ್ಟಾರ್ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕಾ. ಇಂದು ಅಲ್ಲು ಅರ್ಜುನ್ ಬರ್ತ್‌ಡೇ ಖುಷಿಯ ಜೊತೆಗೆ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಪ್ಯಾನ್ ಇಂಡಿಯಾ ಮೂವಿ ʻಪುಷ್ಪʼ ಟೀಸರ್ ರಿಲೀಸ್ ಆಗಿದೆ.
ಮೈತ್ರಿ ಮೂವೀಸ್ ಬ್ಯಾನರ್‌ನಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು ಸುಕುಮಾರ್ ನಿರ್ದೇಶನದ ʻಪುಷ್ಪʼ ಸಿನಿಮಾ 2021 ರ ಆಗಸ್ಟ್ 13 ರಂದು ಕನ್ನಡ, ತೆಲುಗು ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ದಕ್ಷಿಣದ ಪ್ರತಿಭಾವಂತ ನಟರಾದ ಫಹದ್ ಫಸಲ್, ಧನಂಜಯ ಸಹ ಅಭಿನಯಿಸಿದ್ದಾರೆ.
ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬಿನೇಶನ್‌ನಲ್ಲಿ ಬಂದಿದ್ದ ಆರ್ಯ, ಆರ್ಯ-2 ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಇದೀಗ ಇದೇ ಕಾಂಬಿನೇಶನ್‌ನಲ್ಲಿ ವಿಭಿನ್ನ ಕಥಾಹಂದರದ ಜೊತೆ ಬರ್ತಿರೋ ʻಪುಷ್ಪʼ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ.
ರಕ್ತಚಂದನ ಕಳ್ಳಸಾಗಣೆ ಕುರಿತಾದ ಕಥೆ ಹೊಂದಿರುವ ಸಿನಿಮಾ ಇದಾಗಿದ್ದು, ಲಾರಿ ಡ್ರೈವರ್ ಪುಷ್ಪ ರಾಜ್ ಆಗಿ ಅಲ್ಲು ಅರ್ಜುನ್ ಅಭಿನಯಿಸಿದ್ದಾರೆ. ಹೀಗಾಗಿ ‘ಸ್ಟೈಲಿಶ್ ಸ್ಟಾರ್’ ಅಲ್ಲು ಅರ್ಜುನ್ ಸಿನಿಮಾದಲ್ಲಿ ತುಂಬಾ ಒರಟಾಗಿ ಕಾಣಿಸಿಕೊಂಡಿದ್ದಾರೆ.
ಅಲ್ಲು ಅರ್ಜುನ್ರ ಈ ಲುಕ್ಗೆ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಚಿತ್ರದ ಟೀಸರ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದು, ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾದು ಕುಳಿತಿದ್ದಾರೆ.