ನವದೆಹಲಿ: ದೇಶಾದ್ಯಂತ ಕೊರೋನಾ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಸುಪ್ರೀಂ ಕೋರ್ಟ್ನ ಶೇ.50ಕ್ಕೂ ಅಧಿಕ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ.
ನ್ಯಾಯಮೂರ್ತಿಗಳು, ವಕೀಲರು ಹಾಗು ಗುಮಾಸ್ತರು ಸೇರಿದಂತೆ ಅನೇಕ ಸಿಬ್ಬಂದಿ ಕೋವಿಡ್ನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಬ್ಬಂದಿ ಮನೆಯಿಂದಲೇ ನ್ಯಾಯಾಲಯದ ಕೆಲಸಗಳನ್ನು ಮಾಡುತ್ತಿದ್ದಾರೆ.
ಅಲ್ಲದೇ, ವಿಚಾರಣೆಗಳೂ ಸಹ ವರ್ಚುವಲ್ ಆಗಿ ನಡೆಯುತ್ತಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ನ್ಯಾಯಾಲಯದ ಅರ್ಧದಷ್ಟು ಸಿಬ್ಬಂದಿ ಕೋವಿಡ್ 19 ಸೋಂಕಿಗೆ ಒಳಗಾಗಿರುವುದರಿಂದ ನ್ಯಾಯಾಲಯದ ಕೊಠಡಿಗಳು, ಆವರಣಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.
ಹೀಗಾಗಿ ಇಂದು ನಿಗದಿತ ಸಮಯಕ್ಕಿಂತ ಒಂದು ತಾಸು ತಡವಾಗಿ ಪ್ರಕರಣಗಳ ವಿಚಾರಣೆ ಆರಂಭವಾಗಲಿದೆ. 10.30ಕ್ಕೆ ನಿಗದಿಯಾಗಿದ್ದ ನ್ಯಾಯಪೀಠವು 11.30ರಿಂದ ಕಾರ್ಯ ನಿರ್ವಹಿಸಲಿದೆ ಎಂದು ನ್ಯಾಯಪೀಠ ಮಾಹಿತಿ ನೀಡಿದೆ.