ಮುಖ್ಯಮಂತ್ರಿ ಮೇಲೂ ನಂಬಿಕೆ ಇಲ್ಲ. ಹೈಕಮಾಂಡ್ ಮೇಲೂ ನಂಬಿಕೆ ಇಲ್ಲ ಅನ್ನುವುದಾದರೆ ಸಿ.ಪಿ.ಯೋಗೇಶ್ವರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಯೋಗೇಶ್ವರ್ ಸ್ವತಃ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರಿಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆ ಬಳಿಕ ಮತ್ತೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ರಾಜ್ಯ ಬಿಜೆಪಿಯ ಎಲ್ಲಾ ಶಾಸಕರು ಕಲ್ಲು ಬಂಡೆಗಳಂತೆ ಒಗ್ಗಟ್ಟಾಗಿ ಇದ್ದೇವೆ. ಕೇಂದ್ರ ನಾಯಕರು ಸಿಎಂ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ. ಅವರ ತೀರ್ಮಾನಕ್ಕೆ ನಾವು ಬದ್ಧ ಎಂದರು.
ಬಿಜೆಪಿಯಲ್ಲಿ ಎಲ್ಲಾ ಸರಿ ಇದೆ ಎಂದು ಒಪ್ಪುವುದಿಲ್ಲ. ಆದರೆ ಒಂದೆರೆಡು ಅಸಮಾಧಾನಗಳು ಇವೆ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಒದ್ದು ಶಾಸಕರು ಬರಲಿಲ್ಲವೇ? ಈಗಲೂ ಸರಕಾರದ ಮೇಲೆ ನಂಬಿಕೆ ಇಲ್ಲದವರು ರಾಜೀನಾಮೆ ನೀಡಿ ಹೋಗಬಹುದು ಎಂದು ಅವರು ಹೇಳಿದರು.